ನೆಬ್ರ್ಯಾಸ್ಕ-
	ಅಮೆರಿಕ ಸಂಯುಕ್ತ ಸಂಸ್ಥಾನಗಳ ಮಧ್ಯದಲ್ಲಿರುವ ಒಂದು ರಾಜ್ಯ. 37ನೆಯ ರಾಜ್ಯವಾಗಿ 1867ರಲ್ಲಿ ಅದಕ್ಕೆ ಸೇರಿತು. ಸ್ಥೂಲವಾಗಿ ಉ.ಅ. 40ಲಿ-43ಲಿ ಡಿಗ್ರಿ ಮತ್ತು ಪ.ರೇ. 95ಲಿ-104 ಡಿಗ್ರಿ ನಡುವೆ ಇರುವ ಈ ರಾಜ್ಯದ ಉತ್ತರದಲ್ಲಿ ದಕ್ಷಿಣ ಡಕೋಟ, ಪೂರ್ವದಲ್ಲಿ ಐಯೋವ ಮತ್ತು ಮಿಸೂರಿ. ದಕ್ಷಿಣದಲ್ಲಿ ಕ್ಯಾನ್ಸಸ್, ನೈಋತ್ಯದಲ್ಲಿ ಕಾಲರ್ಯಾಡೋ ಮತ್ತು ಪಶ್ಚಿಮದಲ್ಲಿ ವೈಯೋಮಿಂಗ್ ರಾಜ್ಯಗಳು ಇವೆ. ವಿಸ್ತೀರ್ಣ 2,00,017 ಚ.ಕಿಮೀ. ಜನಸಂಖ್ಯೆ 15,43,000 (1974). ರಾಜಧಾನಿ ಲಿಂಕನ್.

	ಭೌತ ಲಕ್ಷಣ: ನೆಬ್ರ್ಯಾಸ್ಕದ ನೆಲ ವಾಯವ್ಯದಿಂದ ಆಗ್ನೇಯದ ಕಡೆಗೆ ಇಳಿಜಾರಾಗಿದೆ. ಇಡೀ ರಾಜ್ಯ ಅಲೆಯಲೆಯಾದ ಬಯಲು. ಈ ಮೈದಾನದ ಉತ್ತರ ಮತ್ತು ಪೂರ್ವ ಎಲ್ಲೆಗಳ ಪ್ರದೇಶ ಮಾತ್ರ ಬೆಟ್ಟಸೀಮೆ. ರಾಜ್ಯದ ಗರಿಷ್ಠ ಎತ್ತರದ ಬಿಂದು (1,564 ಮೀ.) ಕಿಂಬಲ್ ಕೌಂಟಿಯಲ್ಲಿದೆ. ಅತಿ ತಗ್ಗಿನ ಬಿಂದುವಿನ ಎತ್ತರ ಸಮುದ್ರಮಟ್ಟದಿಂದ 256 ಮೀ; ಇದು ರಿಚರ್ಡ್‍ಸನ್ ಕೌಂಟಿಯಲ್ಲಿದೆ.

	ನೆಬ್ರ್ಯಾಸ್ಕ ರಾಜ್ಯ ಮಿಸೂರಿ ಜಲಾನಯನ ಪ್ರದೇಶದಲ್ಲಿದೆ. ಈ ನದಿ ನೆಬ್ರ್ಯಶ್ಕದ ಪೂರ್ವದ ಅಂಚಿನಲ್ಲಿ ಹರಿಯುತ್ತದೆ. ಮಿಸೂರಿ ಮತ್ತು ಪ್ಲ್ಯಾಟ್ ನದಿಗಳು ಓಮಹಾ ನಗರದ ದಕ್ಷಿಣದಲ್ಲಿ ಸಂಗಮಿಸುತ್ತವೆ. ಪ್ಲ್ಯಾಟ್ ನದಿ ಹಡಗುಗಳ ಸಂಚಾರಕ್ಕೆ ಸಾಕಷ್ಟು ಆಳವಾಗಿಲ್ಲ. ಅದರ ನೀರನ್ನು ವ್ಯವಸಾಯಕ್ಕೆ ಹೆಚ್ಚಾಗಿ ಬಳಸುತ್ತಾರೆ. ನೈಯಾಬ್ರಾರ, ರಿಪಬ್ಲಿಕನ್, ಬಿಗ್‍ಬ್ಲೂ, ಲಿಟಲ್ ಬ್ಲೂ, ಬಿಗ್ ನೆಮೂಹ, ಲಿಟಲ್ ನೆಮೂಹ ಇವು ಮಿಸೂರಿಯ ಇತರ ಉಪನದಿಗಳು. ಪ್ಲ್ಯಾಟ್ ನದಿಯ ಉಪನದಿಗಳು ಎಲ್ಕ್‍ಹಾರ್‍ನ್ ಮತ್ತು ಲೂಪ್. ರಿಪಬ್ಲಿಕನ್ ಮತ್ತು ಬಿಗ್ ಬ್ಲೂ ನದಿಗಳು ರಾಜ್ಯದ ದಕ್ಷಿಣದಲ್ಲಿ ಹರಿಯುತ್ತವೆ. ವೈಯೋಮಿಂಗ್ ರಾಜ್ಯದ ಪೂರ್ವ ಮೇಲ್ನಾಡಿನಲ್ಲಿ ಹುಟ್ಟಿ ರಭಸದಿಂದ ಹರಿಯುವ ನೈಯಾಬ್ರಾರ ನದಿ ರಾಜ್ಯದ ಉತ್ತರದಲ್ಲಿ ಹರಿಯುತ್ತದೆ.

	ವಾಯುಗುಣ: ನೆಬ್ರ್ಯಾಸ್ಕ ರಾಜ್ಯ ಸಮುದ್ರದಿಂದ ತುಂಬ ದೂರದಲ್ಲಿರುವುದರಿಂದ ಇಲ್ಲಿಯ ಉಷ್ಣತೆಯಲ್ಲಿ ತೀವ್ರ ಏರಿಳಿತಗಳಿರುತ್ತವೆ. ಬೇಸಗೆ ಚಳಿಗಾಲಗಳ ಅಂತರ ಅಧಿಕ. ಮಳೆ ಕಡಿಮೆ. ಮಾಧ್ಯ ವಾರ್ಷಿಕ ಉಷ್ಣತೆ ಪೂರ್ವದಲ್ಲಿ 10 ಡಿಗ್ರಿ ನಿಂದ ಪಶ್ಚಿಮದಲ್ಲಿ 9ಲಿ ಡಿಗ್ರಿವರೆಗೆ ವ್ಯತ್ಯಾಸವಾಗುತ್ತದೆ. ಪೂರ್ವದಲ್ಲಿ ಜನವರಿಯ ಮಾಧ್ಯ ಉಷ್ಣತೆ 5.3 ಡಿಗ್ರಿ. ಪಶ್ಚಿಮದಲ್ಲಿ 4.4 ಡಿಗ್ರಿ. ಜುಲೈ ತಿಂಗಳ ಮಾರ್ಧಯ ಉಷ್ಣತೆ ಅನುಕ್ರಮವಾಗಿ 25 ಡಿಗ್ರಿ ಮತ್ತು 23.2 ಡಿಗ್ರಿ. ಮಾಧ್ಯ ವಾರ್ಷಿಕ ಅವಪಾತ ಪೂರ್ವದಲ್ಲಿ 700 ಮಿಮೀ. ಪಶ್ಚಿಮದಲ್ಲಿ 321 ಮಿಮೀ.

	ಸಸ್ಯಪ್ರಾಣಿವರ್ಗ: ನೆಬ್ರ್ಯಾಸ್ಕದ ಹುಲ್ಲುಗಾಡುಗಳಲ್ಲಿ ಹಾಗೂ ನದಿ ಕಣಿವೆಗಳ ಇಳಿ ಭೂಮಿಯಲ್ಲಿ ಹಿಂದೆ ವಿವಿಧ ಬಗೆಯ ಹುಲ್ಲು ಹಾಗೂ ಎಲೆ ಉದುರುವ ಮರಗಳಿದ್ದವು. ಈಗ ಕಾಟನ್ ವುಡ್, ಎಲ್ಮ್, ಓಕ್ ಮತ್ತು ವಾಲ್ನಟ್ ಮರಗಳು ರಾಜ್ಯದ ಪೂರ್ವಭಾಗದ ಕಡಿದಾದ ದಿಣ್ಣೆಗಳ ಮೇಲಿದೆ. ಶಂಕುವರ್ಣಿ ಮರಗಳು ವೈಲ್ಡ್‍ಕ್ಯಾಟ್ ಪ್ರದೇಶ ಮತ್ತು ನೈಯಾಬ್ರಾದ ಕಣಿವೆಯಲ್ಲಿದೆ. ಜನ ನೆಲೆಸುವುದಕ್ಕೆ ಮುಂಚೆ ಉತ್ತರದ ಹುಲ್ಲುಗಾಡುಗಳಲ್ಲಿ ಕಾಡುಕೋಣಗಳು ಹೆಚ್ಚಾಗಿದ್ದವು. ಕವಲುಗೊಂಬಿನ ಸಾರಂಗ, ಕಯೋಟೆ, ನರಿ, ಜ್ಯಾಕ್‍ರ್ಯಾಬಿಟ್, ಸ್ಕಂಕ್, ಬೀವರ್ ಇವು ಇತರ ಪ್ರಾಣಿಗಳು. ಪಕ್ಷಿಗಳು ಹೇರಳವಾಗಿವೆ.

	ಮಣ್ಣು: ರಾಜ್ಯದ ಭೂಮಿ ವ್ಯವಸಾಯಕ್ಕೆ ಅನುಕೂಲವಾಗಿದೆ. ಆಗ್ನೇಯ ಹುಲ್ಲುಗಾಡಿನ ಭೂಮಿಯನ್ನು ಬೇಸಾಯಕ್ಕೆ ತಂದು ಧಾನ್ಯಗಳನ್ನು ಬೆಳೆಯುತ್ತಿದ್ದಾರೆ. ಪಶ್ಚಿಮದ ಭೂಮಿ ಫಲವತ್ತಾಗಿದೆ. ಅಲ್ಲಿಯ ಮಳೆ ಹಿಮಗಾಲದ ಗೋದಿ ಬೆಳೆಗೆ ಯುಕ್ತವಾಗಿದೆ. ಸ್ಯಾಂಡ್‍ಹಿಲ್ ಪ್ರದೇಶದಲ್ಲಿ ಮಳೆ ಪರಿಮಿತ ಹಾಗೂ ಭೂಸವೆತ ಹೆಚ್ಚಾದ ಕಾರಣ ಆ ಭಾಗ ಜಾನುವಾರುಗಳ ಸಾಕಣಿಕೆಗೆ ಮಾತ್ರ ಉಪಯುಕ್ತ. ಅಲ್ಲಿ ಸಣ್ಣ ಸಣ್ಣ ಸರೋವರಗಳು ಹಾಗೂ ಹುಲ್ಲುಗಾಡು ಇರುವುದರಿಂದ ಅದು ಉತ್ತರ ಅಮೆರಿಕದ ಪಶುಪಾಲನೆಯ ಕ್ಷೇತ್ರಗಳಲ್ಲೆಲ್ಲೆ ಅತ್ಯಂತ ದೊಡ್ಡದೆನಿಸಿಕೊಂಡಿದೆ. ಮಿಸೂರಿ ಮತ್ತು  ಪ್ಲ್ಯಾಟ್ ನದಿ ಕಣಿವೆಗಳ ಮೆಕ್ಕಲು ಭೂಮಿಯಲ್ಲಿ ಧಾನ್ಯಗಳನ್ನು ಹಾಗೂ ಇತರ ಬೆಳೆಗಳನ್ನು ಬೆಳೆಯುತ್ತಾರೆ.					(ವಿ.ಜಿ.ಕೆ.)

	ಇತಿಹಾಸ: ಕ್ರಿ.ಪೂ. 8000ದ ಹೊತ್ತಿಗೆ ಅನೇಕ ಪ್ರಾಗೈತಿಹಾಸಿಕ ಬಣಗಳು ನೆಬ್ರ್ಯಾಸ್ಕ ಪ್ರದೇಶದಲ್ಲಿದ್ದವು. ಇತಿಹಾಸ ಕಾಲದ ಆರಂಭದಲ್ಲಿ ಈ ಭಾಗ ಹಲವು ರೆಡ್ ಇಂಡಿಯನ್ ಬಣಗಳ ನೆಲೆಯಾಯಿತು. ಬಿಳಿಯ ಜನ ಇಲ್ಲಿ ಕಾಲಿಟ್ಟದ್ದು ಸ್ಪೇನಿನ ಕೊರೊನಾಡೋ ಎಂಬಾತನ ನಾಯಕತ್ವದಲ್ಲಿ (1541). 16ನೆಯ ಶತಮಾನದ ನಡುಭಾಗದಲ್ಲಿ ಸ್ಪ್ಯಾನಿಷ್ ಮತ್ತು ಫ್ರೆಂಚ್ ಪರಿಶೋಧಕರೂ ತುಪ್ಪುಳು ವ್ಯಾಪಾರಿಗಳು ಇಲ್ಲಿಗೆ ಬಂದರು. 1803ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನ ಈ ರಾಜ್ಯವನ್ನೊಳಗೊಂಡ ಪ್ರದೇಶವನ್ನು ಫ್ರಾನ್ಸಿನಿಂದ ಪಡೆದುಕೊಂಡಿತು. ತರುವಾಯ ತುಪ್ಪುಳು ವ್ಯಾಪಾರ ಮಿಸೂರಿ ನದಿಯ ಅಂಚಿನಲ್ಲಿ ಪ್ರಾರಂಭವಾಯಿತು. ಆಗ ನೆಬ್ರ್ಯಾಸ್ಕ ಮುಖ್ಯವಾಗಿ ತುಪ್ಪುಳಿಗಾಗಿ ಪ್ರಾಣಿಗಳನ್ನು ಬೇಟೆಯಡಲು ಉತ್ತರ ಮತ್ತು ಪಶ್ಚಿಮ ಭಾಗಗಳಿಗೆ ಹೋಗುವ ಜನರಿಗೆ ಹೆದ್ದಾರಿಯಾಯಿತು. 1884ರಲ್ಲಿ ಪ್ಲ್ಯಾಟ್ ನದಿಯ ಕಣಿವೆ ಮತ್ತೊಂದು ಹೆದ್ದಾರಿಯಾಗಿ ಪರಿಣಮಿಸಿ ಆ ಮೂಲಕ ಸಾವಿರಾರು ಜನ ಪಶ್ಚಿಮದ ಕಡೆಗೆ ಸಾಗಿದರು. ಪೆಸಿಫಿಕ್ ಸಾಗರದ ಕಡೆ ರೈಲು ಮಾರ್ಗ ಹಾಕುತ್ತಿದ್ದ ಕಾಲದಲ್ಲಿ ನೆಬ್ರ್ಯಸ್ಕ ಮತ್ತು ಪ್ಲ್ಯಾಟ್ ಕಣಿವೆಗಳೂ ಜನಭರಿತವಾದುವು. 1854ರಲ್ಲಿ ನೆಬ್ರ್ಯಸ್ಕಕ್ಕೆ ರಾಜಕೀಯ ಸ್ಥಾನಮಾನಗಳು ದೊರಕಿದವು. 1863ರ ವೇಳೆಗೆ ನೆಬ್ರ್ಯಾಸ್ಕದ ವಿಸ್ತೀರ್ಣ ಹೆಚ್ಚಿತು.

	ಮಿಸೂರಿ ಮತ್ತು ಪ್ಲ್ಯಾಟ್ ನದೀ ಬಯಲುಗಳೂ ಫಲವತ್ತಾಗಿರುವ ಕಾರಣ ರಾಜ್ಯ ವ್ಯವಸಾಯ ಪ್ರಧಾನವಾಯಿತು. ಈ ನದಿಗಳ ದಂಡೆಗಳ ಮೇಲೆ ಸ್ಥಾಪಿತವಾದ ಪಟ್ಟಣಗಳು ಪಶ್ಚಿಮದ ಕಡೆ ಸರಕುಗಳ ಸಾಗಾಟಕ್ಕೆ ಮತ್ತು ಪ್ರಯಾಣಿಕರ ಸಂಚಾರಕ್ಕೆ ಕೇಂದ್ರಗಳಾದವು. 1869ರಲ್ಲಿ ಯೂನಿಯನ್ ಪೆಸಿಫಿಕ್ ರೈಲುಮಾರ್ಗ ಪೂರ್ಣಗೊಂಡಿತು. ಇತರ ರೈಲುಮಾರ್ಗಗಳ ನಿರ್ಮಾಣವಾಯಿತು. ನೆಬ್ರ್ಯಾಸ್ಕ ಆಂತರಿಕವಾಗಿ ಅಭಿವೃದ್ಧಿಹೊಂದಿತು.

	1867ರ ಮಾರ್ಚ್ 1ರಂದು ನೆಬ್ರ್ಯಾಸ್ಕ ಅಮೆರಿಕ ಸಂಯುಕ್ತ ಸಂಸ್ಥಾನಗಳಿಗೆ ಸೇರಿತು. 1880ರ ದಶಕದಲ್ಲಿ ಓಮಹಾ ಪಟ್ಟಣ ಪ್ರಮುಖ ಕೈಗಾರಿಕಾ ಕೇಂದ್ರವಾಯಿತು. ಮಾಂಸದ ಡಬ್ಬೀಕರಣ ಕೇಂದ್ರವಾಯಿತು. ಲಿಂಕನ್ ನಗರ ರಾಜಧಾನಿಯಾಯಿತು. ಅಲ್ಲಿ ನೆಬ್ರ್ಯಾಸ್ಕ ವಿಶ್ವವಿದ್ಯಾಲಯ ಸ್ಥಾಪಿತವಾಯಿತು.
(ವಿ.ಜಿ.ಕೆ; ಎಸ್.ಕೆ.ಎಸ್.)

	ಆಡಳಿತ: ನೆಬ್ರ್ಯಾಸ್ಕ ರಾಜ್ಯದ ಈಗಿನ ಸಂವಿಧಾನ 1825ರಲ್ಲಿ ಅಂಗೀಕೃತವಾಯಿತು. ಅದಕ್ಕೆ 1975ರ ವರೆಗೆ 164 ತಿದ್ದುಪಡಿಗಳಾಗಿವೆ. 1984ರಲ್ಲಿ ಅಂಗೀಕೃತವಾದ ತಿದ್ದುಪಡಿಯ ಪ್ರಕಾರ ರಾಜ್ಯಕ್ಕೆ ಏಕಸದನ ಶಾಸಕಾಂಗವಿದೆ. ಸಭೆಯ ಸದಸ್ಯರ ಚುನಾವಣೆ ಸಾರ್ವತ್ರಿಕ ಮತದಾನದ ಮೂಲಕ 4 ವರ್ಷಗಳಿಗೊಮ್ಮೆ ನಡೆಯುತ್ತದೆ. ಸದಸ್ಯರ ಸಂಖ್ಯೆ 49. ಅಮೆರಿಕ ಸಂಯುಕ್ತ ಸಂಸ್ಥಾನಗಳ ರಾಜ್ಯಗಳ ಪೈಕಿ ಏಕಸದನವಿರುವ ರಾಜ್ಯ ಇದೊಂದೇ. ರಾಜ್ಯದ ಗವರ್ನರ್ ಮತ್ತು ಲೆಫ್ಟೆನೆಂಟ್ ಗವರ್ನರ್‍ಗಳು ಚುನಾವಣೆಗಳು ಮೂಲಕ ನೇಮಕಗೊಂಡು 4 ವರ್ಷ ಅಧಿಕಾರದಲ್ಲಿರುತ್ತಾರೆ. ಆಡಳಿತಕ್ಕಾಗಿ ರಾಜ್ಯವನ್ನು 93 ಕೌಂಟಿಗಳಾಗಿ ವಿಭಾಗ ಮಾಡಲಾಗಿದೆ. ರಾಷ್ಟ್ರದ ಕಾಂಗ್ರೆಸ್‍ನಲ್ಲಿ ನೆಬ್ರ್ಯಾಸ್ಕದ ಪರವಾಗಿ 2 ಸೆನೆಟರುಗಳು ಮತ್ತು 3 ಪ್ರತಿನಿಧಿಗಳು ಇದ್ದಾರೆ.

	ಸರ್ವೋಚ್ಚ ನ್ಯಾಯಾಲಯದಲ್ಲಿ 6 ನ್ಯಾಯಮೂರ್ತಿಗಳು ಮತ್ತು 6 ಮಂದಿ ಸಹ ನ್ಯಾಯಮೂರ್ತಿಗಳಿದ್ದಾರೆ. ಅವರ ಅಧಿಕಾರಾವಧಿ 6 ವರ್ಷ. ಅಪೀಲುಗಳನ್ನು ವಿಚಾರಿಸುವ ನ್ಯಾಯಾಧಿಕಾರ ಈ ನ್ಯಾಯಾಲಯಕ್ಕೆ ಉಂಟು.

	ಶಿಕ್ಷಣ: 7ರಿಂದ 16 ವರ್ಷಗಳವರೆಗಿನ ಮಕ್ಕಳಿಗೆ ಶಿಕ್ಷಣ ಕಡ್ಡಾಯ. 1973ರಲ್ಲಿ 1,76,829 ವಿದ್ಯಾರ್ಥಿಗಳೂ ಸೆಕೆಂಡರಿ ಶಾಲೆಗಳಲ್ಲಿ 1,47,698 ವಿದ್ಯಾರ್ಥಿಗಳೂ ಶಿಕ್ಷಣ ಪಡೆಯುತ್ತಿದ್ದರು. ಲಿಂಕನ್‍ನಲ್ಲಿ 1869ರಲ್ಲಿ ಸ್ಥಾಪಿತವಾಗಿ 1871ರಲ್ಲಿ ಆರಂಭವಾದ ನೆಬ್ರ್ಯಾಸ್ಕ ವಿಶ್ವವಿದ್ಯಾಲಯ ರಾಜ್ಯದ ಪ್ರಮುಖ ವಿಶ್ವವಿದ್ಯಾಲಯ. ಇದಲ್ಲದೆ ರಾಜ್ಯದಲ್ಲಿ ಖಾಸಗಿ ಪ್ರೋತ್ಸಾಹದಿಂದ ನಡೆಯುತ್ತಿರುವ ವಿಶ್ವವಿದ್ಯಾಲಯಗಳು ಇವೆ.
	ಆರ್ಥಿಕತೆ: ಜನರ ಮುಖ್ಯ ಕಸುಬು ವ್ಯವಸಾಯ ಮತ್ತು ಪಶುಪಾಲನೆ. 1973ರಲ್ಲಿದ್ದ ವ್ಯವಸಾಯ ಕ್ಷೇತ್ರಗಳ ಸಂಖ್ಯೆ 70,000; 481 ಲಕ್ಷ ಎಕರೆ ನೆಲ ಕೃಷಿಗೆ ಒಳಪಟ್ಟಿತ್ತು. ಮುಸುಕಿನ ಜೋಳ, ಓಟ್ಸ್, ಗೋದಿ, ಸೋರ್ಗಂ, ಸೋಯಾಬೀನ್ಸ್, ಆಲೂಗಡ್ಡೆ, ಸಕ್ಕರೆ ಬೀಟ್, ಹುಲ್ಲು-ಇವು ಪ್ರಮುಖ ಉತ್ಪನ್ನಗಳು. ರಾಜ್ಯದಲ್ಲಿ ಭಾರಿ ದನಗಾವಲುಗಳಿವೆ. 1975ರಲ್ಲಿ ರಾಜ್ಯದಲ್ಲಿ 69,00,000 ದನಗಳೂ 30,50,000 ಹಂದಿಗಳೂ ಇದ್ದವು.

	ಪೆಟ್ರೋಲ್ ಗಣಿಗಾರಿಕೆ ಮತ್ತು ಸಂಸ್ಕರಣ, ಮಾಂಸ ಬೆಣ್ಣೆ ಹಾಲುಪುಡಿ ಹಾಗೂ ಇತರ ಆಹಾರ ಪದಾರ್ಥಗಳ ಡಬ್ಬೀಕರಣ, ವಿದ್ಯುಚ್ಛಕ್ತಿಯ ಸಲಕರಣೆ, ಲೋಹವಸ್ತು, ಯಂತ್ರ, ರಬ್ಬರ್ ಮತ್ತು ಪ್ಲಾಸ್ಟಿಕ್ ಸರಕು, ರಾಸಾಯನಿಕ ಮತ್ತು ಸಿಮೆಂಟ್ ತಯಾರಿಕೆ ಇವು ರಾಜ್ಯದ ಮುಖ್ಯ ಕೈಗಾರಿಕೆಗಳು.

	ಸಾರಿಗೆ ಸಂಪರ್ಕ: ಅಮೆರಿಕದ ಪೂರ್ವ ಹಾಗೂ ಪಶ್ಚಿಮ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳು ನೆಬ್ರ್ಯಾಸ್ಕದ ಮೂಲಕ ಸಾಗಿವೆ. ಓಮಹಾ, ಲಿಂಕನ್, ಐಯೋವ ಮೊದಲಾದ ನಗರಗಳಿಗೆ ಹೋಗುವ ಒಳನಾಡ ಹೆದ್ದಾರಿಗಳಿವೆ. ರಾಜ್ಯದಲ್ಲಿ 5 ಮುಖ್ಯ ರೈಲುಮಾರ್ಗಗಳಿವೆ. ಓಮಹಾ ಪಟ್ಟಣ ಮಿಸೂರಿ ನದಿಯ ದಂಡೆಯ ಮೇಲಣ ಪ್ರಮುಖ ಬಂದರು. ಅಲ್ಲಿಂದ ಸರಕುಗಳು ಸಾಗುತ್ತವೆ. ನೆಬ್ರ್ಯಾಸ್ಕ ಇನ್ನೊಂದು ಪಟ್ಟಣ. ಒಳನಾಡಿನ ಹಾಗೂ ಅಂತರರಾಜ್ಯ ವಿಮಾನ ವ್ಯವಸ್ಥೆಯುಂಟು. 1973ರಲ್ಲಿ 12,316 ಕಿಮೀ. ರೈಲುಮಾರ್ಗಗಳೂ 15,680 ಕಿಮೀ ಹೆದ್ದಾರಿಗಳೂ 1,41,146 ಕಿಮೀ. ಸ್ಥಳೀಯ ರಸ್ತೆಗಳೂ 339 ವಿಮಾನ ನಿಲ್ದಾಣಗಳೂ ಇದ್ದುವು.
(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ